ಅಧಿಕ ಸಂಖ್ಯೆಯ ಜೀವಜನ್ಯ ಸಂಯುಕ್ತಗಳು ಇಂಗಾಲ ಸಂಯುಕ್ತಗಳಾದ್ದರಿಂದ ನಾವು ಹೆಜ್ಜೆ ಹೆಜ್ಜೆಗೂ ಅವನ್ನು ಕಾಣುವುದು ಮತ್ತು ಉಪಯೋಗಿಸುವುದು ಅನಿವಾರ್ಯವೇ ಆಗಿದೆ. ಕೂಲಂಕಷ ಪರಿಶೀಲನೆಯ ಪರಿಣಾಮವಾಗಿ ಜೀವನದ ಇರುವಿಕೆಗೇ ಕಾರಣವಾದ ಇಂಗಾಲ ಸಂಯುಕ್ತಗಳ ವಿಷಯವಾಗಿ ಇಂದು ಅಧಿಕ ಜ್ನಾನ ಪಡೆದಿದ್ದೇವೆ. ಪ್ರೋಟೀನ್, ಎನ್ಜೈಮ್, ಹಾರ್ಮೋನ್ ಮೊದಲಾದುವುಗಳ ವಿಷಯವಾದ ತಿಳಿವಳಿಕೆ ಜೀವ ರಸಾಯನವಿಜ್ಞಾನ ಮತ್ತು ಅಣುಜೀವಶಾಸ್ತ್ರದ ಅಭ್ಯಾಸಗಳ ಮೊದಲ ಹಂತ. ವಿಜ್ನಾನದ ಉಳಿದ ಅನೇಕ ವಿಭಾಗಗಳ ಅಭ್ಯಾಸಿಗಳು ಸದಾ ತಮಗೆ ಬೇಕಾದ ಸಲಕರಣೆಗಳಿಗಾಗಿ, ವಿಧಾನಗಳಿಗಾಗಿ ಇಂಗಾಲಸಂಯುಕ್ತಗಳತ್ತ ನೋಡುತ್ತಲೇ ಇರಬೇಕಾಗುತ್ತದೆ. ಜೀವರಸಾಯನವಿಜ್ಞಾನ ಮತ್ತು ಅಣುಜೀವವಿಜ್ಞಾನಗಳು ಇಂಗಾಲ ಸಂಯುಕ್ತ ರಸಾಯನವಿಜ್ಞಾನದಿಂದಲೇ ಅಂಕುರಗೊಂಡಿರುವ ಹೊಸ ರಸಾಯನವಿಜ್ಞಾನ ವಿಭಾಗಗಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ